ಅಕ್ಕನ ಪ್ರೀತಿ!!!!
ಅಕ್ಕನ ಪ್ರೀತಿ!!!!
ಅಮ್ಮ ಎನ್ನುವ ಜೀವವೆಷ್ಟು ಆತ್ಮೀಯವೋ ಅಮ್ಮ ಎಂಬ ಪದ ಕೂಡ ಅಷ್ಟೇ ಪವಿತ್ರ. ಹಾಗೆಯೇ ಅಮ್ಮನಂತೆ ತೀರಾ ಹತ್ತಿರದ ಇನ್ನೊಂದು ಸಂಬಂಧವಿದೆ, ಅವಳೇ ಅಕ್ಕನೆಂಬ ಅಮ್ಮ. ಅಮ್ಮ ತನ್ನ ಮಕ್ಕಳನ್ನೆಷ್ಟು ಪ್ರೀತಿಸುತ್ತಾಳೋ ಅಕ್ಕನೂ ತನ್ನ ಒಡಹುಟ್ಟಿದವರಿಗೆ ಕಾಳಜಿಯನ್ನು ತೋರಿಸುತ್ತಾಳೆ.ಅಮ್ಮನಂತೆ ಕುಟುಂಬದ ಜವಾಬ್ದಾರಿಗಳನ್ನು ಹೊರಬಯಸುತ್ತಾಳೆ. ಹೊಣೆಗಾರಿಕೆಯ ಅನುಭವಗಳಿಲ್ಲದಿದ್ದರೂ ತಾನು ಹಿರಿಯಳೆಂಬ ಭಾವ ತನ್ನಿಂದತಾನೆ ಮೂಡಿ ಅಮ್ಮನ ಹೆಗಲಿಗೆ ಹೆಗಲು ನೀಡುವಳು. ಅದಿಕ್ಕೇನೆ ಅವಳು ಇನ್ನೊಂದು ಅಮ್ಮನೆಂದು ಕರೆಯಿಸಿಕೊಳ್ಳುತ್ತಾಳೆ."ಅಕ್ಕನ ಸ್ಥಾನ - ಮಹತ್ವ"ಕೆಲವು ಕುಟುಂಬಗಳಲ್ಲಿ ಕಾಣುವುದೇನೆಂದರೆ ಹೆತ್ತವರಿಗಿಂತ ಅಕ್ಕನೆಂಬ ಜೀವಿ ಆತ್ಮೀಯಳು. ಒಡಹುಟ್ಟಿದವರಿಗೆ ಆಪತ್ಬಾಂಧವಳು. ಹೆತ್ತವರೊಡನೆ ಹೇಳಿಕೊಳ್ಳಲಾಗದ್ದನ್ನು ಅಕ್ಕನನ್ನು ಪುಸಲಾಯಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದಿದೆ. ಅಲ್ಲಿ ಅವಳ ಜೊತೆ ಭಯವಿಲ್ಲ, ಮನ ಬಿಚ್ಚಿ ಮಾತನಾಡಬಹುದು, ಚೇಷ್ಠೆಗೆ ಅವಕಾಶವಿದೆ. ಹೀಗೆ ಅಕ್ಕನು ಉನ್ನತ ಸ್ಥಾನದಲ್ಲಿದ್ದಾಳೆಂದು ನನ್ನ ನಂಬಿಕೆ.
ಇನ್ನೂ "ಅಕ್ಕ ತಂಗಿಯ ಅನುಬಂಧ" ನನ್ನ ಮನೆಯಲ್ಲಿ ನಾವಿಬ್ಬರು ಹೆಣ್ಣುಮಕ್ಕಳು. ತಂಗಿಯಾದ ನಾನು ಅಕ್ಕ ತಂಗಿಯ ಸಂಬಂಧದ ಬಗ್ಗೆ ಒಂದೆರಡು ಮಾತುಗಳನ್ನು ಬರೆಯುತ್ತಿದ್ದೇನೆ. ಅಕ್ಕ ತಂಗಿಯ ಸಂಬಂಧದ ಅನುಬಂಧ ಚೆಂದ. ಕೆಲವು ವರ್ಷಗಳ ವಯಸ್ಸಿನ ಅಂತರವಿರುವ ಅಕ್ಕ ತಂಗಿಯೆಂದರೆ ಅವರು ಸ್ನೇಹಿತೆಯರೆಂದೇ ಲೆಕ್ಕ. ಅಮ್ಮನೊಡನೆ ಹೇಳಿಕೊಳ್ಳಲಾಗದ್ದನ್ನು ಅವರಿಬ್ಬರು ಮಾತನಾಡಿಕೊಳ್ಳುವುದಿದೆ. ಅಕ್ಕನ ಸ್ನೇಹಿತರು ತಂಗಿಗೂ ಸ್ನೇಹಿತರು, ತಂಗಿಯ ಸ್ನೇಹಿತರು ಅಕ್ಕನಿಗೆ ತಂಗಿ ತಮ್ಮಂದಿರಂತೆ.ವಯಸ್ಸಿನ ಅಂತರ ಕಡಿಮೆಯಿದ್ದಷ್ಟೂ ಆಟ, ಇಷ್ಟ, ಕಷ್ಟಗಳಲ್ಲಿ ಸ್ವಲ್ಪನಾದರೂ ಸಾಮ್ಯತೆ ಇರುತ್ತದೆ. ಹಾಗೆಯೇ ಕಚ್ಚಾಟವೂ ಅಧಿಕವೇ! ಅಂತರ ಜಾಸ್ತಿಯಾದಂತೆ ಅಲ್ಲಿ ಅಕ್ಕ ತಂಗಿ ಎಂಬ ಭಾವಕ್ಕಿಂತ ಅಕ್ಕನೆಂದರೆ ಇನ್ನೊಂದು ಅಮ್ಮನಂತೆ ತಂಗಿಗೆ, ತಂಗಿಯೆಂದರೆ ಪುಟಾಣಿ ಮಗುವಂತೆ ಪ್ರೀತಿಸುವಳು ಅಕ್ಕ.ಅಕ್ಕ ತಂಗಿಯರು ಜಗಳವಾಡಿದಾಗ, ಹೆತ್ತವರ ಕಣ್ಣಿಗೆ ಗುರಿಯಾಗುವುದು ಮೊದಲಿಗೆ ಅಕ್ಕನೇ. ಅವಳು ಚಿಕ್ಕವಳು, ನೀನು ಸುಮ್ಮನಿದ್ದು ಬಿಡು ಎಂದು ಅಕ್ಕನಿಗೆ ಉಪದೇಶಿಸುವ ಅವರು, ಕೊನೆಗೆ ಜಗಳ ನಿಂತು ಅಕ್ಕ ತಂಗಿ ಪುನಃ ಒಂದಾಗುವರು. ಜಗಳ ವಿಕೋಪಕ್ಕೆ ಹೋದಾಗ ತಂಗಿಯೆನ್ನುತ್ತಾಳೆ ನಾನೊಬ್ಬಳೇ ಮಗಳಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು, ಅದಿಕ್ಕೆ ಅಕ್ಕನ ತಿರುಗುಬಾಣ ನಾನು ಮೊದಲು ಹುಟ್ಟಿದ್ದು, ನೀನು ಹುಟ್ಟಿಯೇ ಇಲ್ಲವಾಗಿದ್ದರೆ ಒಳ್ಳೆದಿತ್ತು ಎಂದು.ಇಂತಹ ಹುಸಿ ಮುನಿಸು ಸಾಮಾನ್ಯ ಅಕ್ಕ ತಂಗಿಯರ ನಡುವೆ, ಹಾಗೆಂದು ಒಬ್ಬರನೊಬ್ಬರು ಬಿಟ್ಟಿರುವುದಿಲ್ಲ, ಬಿಟ್ಟು ಕೊಡುವುದಿಲ್ಲ. ಗಂಡು ಮಕ್ಕಳಿಗೆ ಹೋಲಿಸಿದರೆ ಮೈ ಕೈ ಬಡಿದಾಟ ಕಡಿಮೆ ಅಕ್ಕ ತಂಗಿಯರ ಮಧ್ಯೆ. ಏನಿದ್ದರೂ ಬೈಗುಳಗಳು, ಇಲ್ಲವಾದರೆ ನಾನು ನಿನಗೆ ಕೊಟ್ಟಿದ್ದನ್ನು ಪುನಃ ವಾಪಸ್ ಕೊಡು ಅನ್ನುವುದು ಹೀಗೆ ಅಲ್ಲಿಗಲ್ಲಿಗೆ ಮುಗಿಯುವುದು ಕದನ.ಇನ್ನು ಬಟ್ಟೆ ವಿಷಯದಲ್ಲಿ ಅಕ್ಕನ ಬಟ್ಟೆಗಳನ್ನು ತಂಗಿ ಹಾಕುವುದು, ತಂಗಿದು ಅಕ್ಕನಿಗೆ ಬರುವುದು, ಹಂಚುವಿಕೆಯ ಮನೋಭಾವ ಮಕ್ಕಳಲ್ಲಿ ಚಿಕ್ಕವಯಸ್ಸಿನಲ್ಲೇ ಮೂಡುವುದು. ಕಪಾಟಿನಲ್ಲಿದ್ದ ವಸ್ತುಗಳನ್ನೋ, ಬಟ್ಟೆಗಳನ್ನೋ ಹೇಳದೇ ಕೇಳದೆ ತೆಗೆದುಕೊಂಡರೆ ಪಟ್ಟೆಂದು ಅವುಗಳ ಮೇಲೆ ಅಪಾರ ಪ್ರೀತಿ ತೋರುವುದು ಕಾರಣ ಅದು ತನ್ನ ಬಳಿಯಿಲ್ಲವೆಂದು.
ಊಟ ಮುಗಿಸಿ ಮಲಗುವ ಹೊತ್ತಲ್ಲಿ ಮನೆಯಲ್ಲಿ ಎಲ್ಲರೂ ಮಲಗಿ, ಮನೆಯ ಲೈಟ್ಸ್ ಆಫ್ ಆದರೂ ಇವರಿಬ್ಬರ ಪಟ್ಟಾಂಗ ಮುಗಿದಿರೋಲ್ಲ. ಆ ಕತ್ತಲಲ್ಲೇ ಹರಟೆ ಹೊಡೆಯೋಕೆ ಇನ್ನೂ ಖುಷಿ, ಇನ್ನೂ ಮಲಗ್ಲಿಲ್ವ?? ಎಂದು ಅಮ್ಮನ ಮಾತನ್ನೂ ಕೇಳಿಸಿಕೊಳ್ಳದವರಂತೆ, ಆವತ್ತೇ ಮುಗಿಸಬೇಕೆಂಬ, ಮುಗಿಸಲು ಮನಸ್ಸಿರದಷ್ಟು ಮಾತು.
ಅದೆನೋಪ್ಪ ಎಲ್ಲರೂ ಹೇಳ್ತಾರೆ ಅಕ್ಕ - ಅಣ್ಣ ಎಲ್ಲಾ ಇರಬಾರದು. ಅವರೂ ಯಾವಾಗಲೂ ತೊಂದರೆ ಕೊಡ್ತಾರೆ ಅಂತ...ಆದ್ರೆ ನಂಗೆ ಹಾಗನ್ನಿಸಲಿಲ್ಲ.. ಅಕ್ಕ ಅಮ್ಮನ ಥರ ಮುದ್ದು ಮಾಡ್ತಾಳೆ , ಅಪ್ಪನ ಥರ ಕಾಳಜಿ
ತೋರಿಸುತ್ತಾಳೆ. ನೆರಳಿನ ಥರ ನಮ್ಮ ಯಾವುದೇ ಸಮಸ್ಯೆಗೆ ಪರಿಹಾರವಾಗಿ ಇರುತ್ತಾಳೆ. ಗೆಳೆಯರ ಥರ ಕೀಟಲೆ ಮಾಡ್ತಾಳೆ.ಗುರು ಥರ ಬುದ್ದಿ ಹೇಳಿಕೊಡುತ್ತಾಳೆ. ಎಲ್ಲರಿಗೂ ಸಂತೋಷವನ್ನು ಹಂಚುತ್ತಾಳೆ. ತಲೆಹರಟೆ ಜಗಳಗಳಲ್ಲೆಲ್ಲಾ ಭಾಗಿಯಾಗುತ್ತಾಳೆ. ಒಟ್ಟಾಗಿ ನಮ್ಮೆಲ್ಲಾ ಕಾಟವನ್ನು ಸಹಿಸಿಕೊಳ್ಳುತ್ತಾಳೆ .
ಒಬ್ಬ ಅಮ್ಮ ತನ್ನ ಮಗುವನ್ನು ಎಷ್ಟು ಪ್ರೀತಿಸಬಹುದೋ ಅದೇ ಮಟ್ಟಿಗೆ ಅಕ್ಕ ತನ್ನ ತಂಗಿಯನ್ನು ಪ್ರೀತಿಸಬಲ್ಲಳು. ಕಾಳಜಿ ವಹಿಸುತ್ತಾಳೆ. ಕೈಹಿಡಿದು ನಡೆಸುತ್ತಾಳೆ .ಮಮತೆ ತೋರುತ್ತಾಳೆ. ತ್ಯಾಗಿಯಾಗಿ ಬದುಕುತ್ತಾಳೆ.ಎಲ್ಲಕ್ಕಿಂತಲೂ ಜೀವನದ ಸೂಕ್ಷ್ಮತೆಗಳನ್ನು ಬೇಗನೆ ಕಲಿತುಬಿಡುತ್ತಾಳೆ. ಅಮ್ಮನಂತೆ ತಪ್ಪು ಸರಿ ಹೇಳಿ ಕೊಡುವಂತೆ ಅಮ್ಮನಗಿಂತಲೂ ಸಮರ್ಥವಾಗಿ ಅದನ್ನು ತಿಳಿಸಬಲ್ಲಳು. ಅಕ್ಕ ಅನ್ನುವ ಮಾತು ಎಷ್ಟು ಚಂದ ಅಲ್ಲಾ!!!
–✍️ ಸಂಜನಾ ವಾಲ್ತಾಜೆ
👏👌
ReplyDelete👌👌👌
ReplyDelete