ತಲೆದಂಡ!!!
ತಲೆದಂಡ!!!
ಆಧುನಿಕತೆಯ ಹೆಸರಿನಲ್ಲಿ ಕಾಡಿನ ಮಧ್ಯದಲ್ಲಿ ರಸ್ತೆಗಳ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿದಿರುವ ಉದಾಹರಣೆಳಿವೆ. ಮರ ಕಡಿಯುವುದರಿಂದ ಆಗುವ ಅನಾಹುತಗಳ ಬಗ್ಗೆ ಬೀದಿ ನಾಟಕ, ಸಾಕ್ಷ್ಯಚಿತ್ರಗಳ ಮೂಲಕ ಆಗಾಗ ಅರಿವು ಮೂಡಿಸುತ್ತಲೇ ಇರುತ್ತಾರೆ. ಈ ಬಾರಿ ನಿರ್ದೇಶಕ ಪ್ರವೀಣ್ ಕೃಪಾಕರ್ ‘ತಲೆ ದಂಡ’ ಸಿನಿಮಾದ ಮೂಲಕ ಮರ, ಗಿಡಗಳು, ಪ್ರಕೃತಿ ಮನುಷ್ಯನ ಜೀವನಕ್ಕೆ ಎಷ್ಟು ಅವಶ್ಯಕ ಮತ್ತು ಅದರ ವಿರುದ್ಧ ನಿರಂತರ ಹೋರಾಟ ಮಾಡುತ್ತಲೇ ಇರಬೇಕು ಎಂಬ ಅಂಶವನ್ನು ಸರಳವಾಗಿ ಹೇಳಿದ್ದಾರೆ.
ಪ್ರವೀಣ್ ಕೃಪಾಕರ್ ಇಂತಹದ್ದೊಂದು ಸೂಕ್ಷ್ಮವಾದ ವಿಷಯವನ್ನು ಹೇಳಲು ಆಯ್ಕೆ ಮಾಡಿಕೊಂಡಿರುವ ಕಥಾ ನಾಯಕ ಬುದ್ಧಿ ಮಾಂದ್ಯ ಎಂಬುದು ವಿಶೇಷ.
ಒಂದು ಸರಳ ಕಥೆ ವಯಸ್ಸಾದರೂ ಬುದ್ದಿ ಬೆಳೆಯದೇ ಇರುವವನಿಗೂ ಗಿಡ, ಮರಗಳ ಮಹತ್ವ ಗೊತ್ತು. ಎಲ್ಲವನ್ನು ತಿಳಿದಿರುವ ಬುದ್ಧಿವಂತರಿಗೆ ಅದರ ಅರಿವಿಲ್ಲದೇ ಹೋಗುತ್ತಿರುವುದು ವಿಪರ್ಯಾಸ ಎಂಬುದನ್ನು ಸೂಚ್ಯಕವಾಗಿ ತಿಳಿಸಿದ್ದಾರೆ. ಸೋಲಿಗರ ಹುಡುಗ ಬುದ್ಧಿ ಕಡಿಮೆ ಇರುವ ಕುನ್ನೇ ಗೌಡನಿಗೆ (ಸಂಚಾರಿ ವಿಜಯ್) ಕಾಡು, ಗಿಡ, ಮರವೆಂದರೆ ಅಚ್ಚುಮೆಚ್ಚು. ಗಿಡಗಳನ್ನು, ಮರಗಳನ್ನು ಅತಿಯಾಗಿ ಪ್ರೀತಿಸುವ ಈತ, ಊರಿನಲ್ಲಿರುವ ಮರಗಳನ್ನು ಕಡಿದು ರಸ್ತೆ ಮಾಡಲು ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹೋಗುತ್ತಾನೆ. ಆತನನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಆತನ ಮಾನಸಿಕ ಆರೋಗ್ಯ ಸರಿ ಇಲ್ಲದ ಕಾರಣ ಬುದ್ದಿಮತ್ತೆ ಪರೀಕ್ಷೆಗೆ ಕಳಿಸಲಾಗುತ್ತದೆ. ಆತನಿಗೆ ಶಿಕ್ಷೆ ಕೊಡಲು ಆಗುವುದಿಲ್ಲ, ಚಿಕಿತ್ಸೆಯ ಅಗತ್ಯವಿದೆ ಎಂಬ ತೀರ್ಪು ಕೋರ್ಟ್‌ನಿಂದ ಬರುತ್ತದೆ. ಚಿಕಿತ್ಸೆಯ ನಂತರ ತನ್ನೂರಿಗೆ ಮರಳಿದ ಕುನ್ನೇ ಗೌಡ ಬದುಕು ಬದಲಾಗುತ್ತದೆ. ಪ್ರಕೃತಿಯನ್ನು ರಕ್ಷಿಸಲೇಬೇಕು ಎಂದು ಪಣ ತೊಡುವ ಆತ ಅದಕ್ಕಾಗಿ ಏನೇನು ಮಾಡುತ್ತಾನೆ ಎಂಬುದೇ ‘ತಲೆ ದಂಡ’ದ ಕಥೆ.
ಇಷ್ಟು ಸರಳವಾದ ಕಥೆಯಲ್ಲಿ ಕಾಡು ಹಾಳಾಗುತ್ತಿದ್ದರೂ ಪರವಾಗಿಲ್ಲ ತಮ್ಮ ಮನೆ ಮತ್ತು ಆಸ್ತಿಗೆ ಏನು ಆಗದಿದ್ದರೆ ಸಾಕು ಎಂಬ ಮನಸ್ಥಿತಿಯ ಜನ. ರಾಜಕೀಯ ವ್ಯಕ್ತಿಗಳ ಡಬಲ್ ಸ್ಟ್ರಾಂಡರ್ಡ್ ವರ್ತನೆ. ಮರಗಳನ್ನು ಉಳಿಸಿಕೊಳ್ಳಲು ಮಾನಸಿಕವಾಗಿ ಅಸಮರ್ಥನಾದ ಹುಡುಗನೊಬ್ಬನ ಹೋರಾಟ ಇವೆಲ್ಲವನ್ನು ನಿರ್ದೇಶಕರು ನೈಜವಾಗಿ ಸೆರೆ ಹಿಡಿದಿದ್ದಾರೆ. ಕಲಾವಿದರಲ್ಲದೇ ಹೋದವರು ಹಲವರು ನಟಿಸಿದ್ದು, ಯಾರು ಸಹ ನಟಿಸಿದಂತೆ ಅನಿಸದೇ ಸಂದರ್ಭಕ್ಕೆ ತಕ್ಕಂತೆ ವರ್ತಿಸಿದ್ದಾರೆ ಎನಿಸುತ್ತದೆ.
ಸಿನಿಮಾದ ಕಥೆಯನ್ನು ಹೇಳಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಜಾಗವೇ ಅದ್ಭುತವಾಗಿದೆ. ಹಲವು ದೃಶ್ಯಗಳನ್ನು ಮರಗಳ ಮೂಲಕ, ಪ್ರಕೃತಿ ಸೌಂದರ್ಯದ ಮೂಲಕವೇ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನ ಪಟ್ಟಿದ್ದಾರೆ. ಹಲವು ದೃಶ್ಯಗಳಲ್ಲಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಜಾಗ ತನ್ನ ಭೌಗೊಳಿಕದ ಮೂಲಕವೇ ಕಥೆ ಹೇಳುತ್ತದೆ. ಹಸಿರು ಉಳಿದರೆ ಮನುಷ್ಯನ ಬದುಕು ಹಸನಾಗುತ್ತದೆ ಎಂಬುದನ್ನು ಸಂಭಾಷಣೆಗಳು ಮತ್ತು ದೃಶ್ಯಗಳ ಮೂಲಕ ತಿಳಿಸಿದ್ದಾರೆ.
ಸಂಚಾರಿ ವಿಜಯ್ ನಟನೆಯ ಅದ್ಭುತ
ನಟ ಸಂಚಾರಿ ವಿಜಯ್ ತೆರೆ ಮೇಲೆ ಕುನ್ನನಾಗಿ ಪರಕಾಯ ಪ್ರವೇಶ ಮಾಡಿದ್ದಾರೆ. ಇಂತಹದ್ದೊಂದು ಪಾತ್ರವನ್ನು ತಾನು ಮಾತ್ರ ಮಾಡಲು ಸಾಧ್ಯ ಎಂಬುದನ್ನು ಹೇಳಿದಂತಿದೆ ಅವರ ನಟನೆ. ರಂಗಕರ್ಮಿ ಮಂಗಳಾ ಅವರ ನಟನೆ, ಡೈಲಾಗ್ ಡೆಲವರಿಯನ್ನು ನೋಡುತ್ತಿದ್ದರೆ, ಇವರು ಯಾಕೆ ಇಷ್ಟು ದಿನ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲಎನಿಸುವುದು ಖಂಡಿತಾ. ಮುಂದಿನ ದಿನಗಳಲ್ಲಿ ಮಂಗಳಾ ಅವರನ್ನು ಹುಡುಕಿಕೊಂಡು ಹಲವರು ಆಫರ್‌ಗಳು ಬಂದರೂ ಅಚ್ಚರಿ ಇಲ್ಲ. ಸಿಕ್ಕಿರುವ ಸ್ವಲ್ಪ ಅವಕಾಶದಲ್ಲಿಯೇ ಚೈತ್ರಾ ಆಚಾರ್ ಗಮನ ಸೆಳೆಯುತ್ತಾರೆ. ಉಳಿದಂತೆ ಬಿ. ಸುರೇಶ, ಮಂಡ್ಯ ರಮೇಶ್, ಭವಾನಿ ಪ್ರಕಾಶ್, ರಮೇಶ್ ಪಂಡಿತ್ ಸೇರಿದಂತೆ ಎಲ್ಲ ಕಲಾವಿದರ ನಟನೆ ಸಿನಿಮಾದ ಕಥೆಗೆ ಪೂರಕವಾಗಿದೆ. ಸಿನಿಮಾಟೋಗ್ರಫರ್ ಅಶೋಕ್ ಕಶ್ಯಪ್ ಚಿತ್ರದ ಮತ್ತೊಬ್ಬ ಹೀರೋ. ಕಾಡು, ಜಲಪಾತ, ಸೋಲಿಗರ ಹಾಡಿ ಇವುಗಳನ್ನು ಅದ್ಭುತವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಕಶ್ಯಪ್. ಹರಿ ಕಾವ್ಯ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಸಂದರ್ಭಕ್ಕೆ ಅನುಗುಣವಾಗಿ ಇಷ್ಟವಾಗುತ್ತವೆ.
ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿರುವ ತಲೆದಂಡ ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ . ಒಂದು ಪುಟ್ಟ ಹಳ್ಳಿ ಅಲ್ಲೊಂದಷ್ಟು ಜನ ಪರಿಸರವೇ ಅವರ ಉಸಿರು ಪ್ರಕೃತಿ ಮಾತೆಯೇ ಅವರ ದೇವರು. ಬುದ್ಧಿಮಾಂದ್ಯ ನಾಗಿ ಹುಟ್ಟಿದ ಮಗನಿಗೆ ತಂದೆ ತೋರುವ ಅಕ್ಕರೆ, ತಾಯಿ ತೋರುವ ಪ್ರೀತಿ ಈ ಸಿನಿಮಾದಲ್ಲಿ ಮನಮುಟ್ಟುವಂತೆ ಮೂಡಿಬಂದಿದೆ. ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ತಂದೆ, ಮಗನಲ್ಲೂ ಪರಿಸರದ ಬಗ್ಗೆ ಅರಿವು ಮೂಡಿಸುತ್ತಾನೆ. ಮರಗಳನ್ನು ಮಗುವಿನಂತೆ ಕಾಣುವ ಓರ್ವ ಬುದ್ಧಿಮಾಂದ್ಯನನ್ನು ಬಂಡವಾಳಶಾಹಿಗಳು ಕಾಣುವ ರೀತಿಯನ್ನು ಅದ್ಭುತವಾಗಿ ತೋರಿಸಲಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶಮಾಡುವ ಸಂಗತಿಯನ್ನು ಸಿನಿಮಾ ದಲ್ಲಿ ಕಟ್ಟಿಕೊಡಲಾಗಿದೆ. ಅಪ್ಪ-ಅಮ್ಮ ಬುದ್ಧಿಮಾಂದ್ಯ ಮಗನೊಂದಿಗೆ ಆರಂಭವಾಗುವ ಕಥೆ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಾಲೆಗಳು ಒದ್ದೆಯಾಗುವ ದೃಶ್ಯಗಳು ಇವೆ. ಮುಗ್ಧತೆ, ಪರಿಸರದ ಅರಿವು, ಮರಗಳನ್ನು ಉಳಿಸಬೇಕೆಂಬ ಕಾಳಜಿ ಈ ಎಲ್ಲದರ ಮಧ್ಯೆ ಅಧಿಕಾರದ ದರ್ಪ, ಆಧುನಿಕತೆ ತಂದೊಡ್ಡುತ್ತಿರುವ ಅವನತಿ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ. ಮರಕ್ಕೆ ಕೊಡಲಿ ಏಟು ಬಿದ್ದರೆ ಅದಕ್ಕೆ ಔಷಧಿ ಹಚ್ಚುವ ಮಗುವಂತೆ ಬಿಗಿದಪ್ಪಿ ಅಳುವ ದೃಶ್ಯ ಎಂಥವರ ಕರಳನ್ನು ಹಿಂಡುವಂತಿದೆ. ಪರಿಸರಕ್ಕಾಗಿ ಜೀವನವನ್ನ ಮುಡುಪಿಟ್ಟ ಜೀವದ ಕಥೆಯೇ ತಲೆದಂಡ.
ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ಈ ಚಿತ್ರದಲ್ಲಿದೆ. ಸೋಲಿಗ ಭಾಷೆಯ ಸ್ಲಾಂಗ್ ನಲ್ಲಿ ಚಿತ್ರದ ಡೈಲಾಗ್ ಗಳಿವೆ. ಮರಗಳ ಔಷಧೀಯ ಗುಣದ ಮಹತ್ವ ಅರಿಯದೆ ಮನುಷ್ಯ ಮಾಡುವ ತಪ್ಪನ್ನು ಎತ್ತಿ ತೋರಿಸಲಾಗಿದೆ. ಮರಗಳ ಮೇಲಾಗುತ್ತಿರುವ ಅನ್ಯಾಯವನ್ನು ತಡೆಯುವ ಬುದ್ಧಿಮಾಂದ್ಯನ ಸ್ಥಿತಿಯ ಬಗ್ಗೆ ಮನಮುಟ್ಟುವಂತೆ ತೋರಿಸಲಾಗಿದೆ.
ತಾಯಿಗೆ ಮಗನೆ ಜೀವ.. ಆದರೆ ಆ ಮಗನಿಗೆ ಮರಗಳೇ ದೈವ.. ಮಗನಿಗಾಗಿ ಮಿಡಿಯುವ ತಾಯಿಯ ಹೃದಯ ಒಂದೆಡೆ, ಮರಗಳ ರಕ್ಷಣೆಗೆ ಹವಣಿಸುವ ಮಗನ ಮನಸ್ಸು ಮತ್ತೊಂದೆಡೆ ಈ ಎರಡರ ಮಧ್ಯೆ ಸಾಗುವ ಕಥೆ ತಲೆದಂಡ.
ತನ್ನೂರಿನ ಮರಗಳನ್ನು ರಕ್ಷಿಸುವ ಓರ್ವ ಬುದ್ಧಿಮಾಂದ್ಯ ಕೊನೆಗೆ ಅದೆಂತಹ ತಲೆದಂಡ ತೆರಬೇಕಾಗುತ್ತದೆ ಎಂಬುದೇ ಚಿತ್ರದ ಪ್ರಮುಖ ಅಂಶ. ಈ ಸಿನಿಮಾ ಒಬ್ಬ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ, ಹೋರಾಟದ ಕಥೆ ಹೊಂದಿದ್ದು ಪಕ್ಕಾ ಕಂಟೆಂಟ್ ಬೇಸ್ಡ್ ಸಿನಿಮಾ. ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಹಾಡುಗಳು. ಒಟ್ಟು 12 ಹಾಡುಗಳಿದ್ದು, ಎಲ್ಲವೂ ಬಿಟ್ ಸಾಂಗ್ ಗಳು.
ತಲೆದಂಡ ಚಿತ್ರಕಥೆ ಕೇಳುತ್ತಿದ್ದ ಹಾಗೆ ಸಂಪೂರ್ಣ ಪರಿಸರದ ಒಂದು ಚಿತ್ರಣ ಕಣ್ಮುಂದೆ ಬರುತ್ತದೆ.
-✍️ ಸಂಜನಾ ವಾಲ್ತಾಜೆ
Comments
Post a Comment