ಅಮ್ಮಾ ಎಂದರೆ ಏನೋ ಹರುಷವೂ.....!!!
ಅಮ್ಮಾ ...!! ಹೊತ್ತು ಹೆತ್ತು ತುತ್ತು ನೀಡಿದವಳು.ಅಮ್ಮ ಎಂದು ಉಚ್ಚರಿಸಿದ ಕೂಡಲೇ ವಾತ್ಸಲ್ಯದ ಜಗತ್ತೊಂದು ಕಣ್ಣೆದುರು ತೆರೆದುಕೊಳ್ಳುತ್ತದೆ. ಆಕೆಗೆ ಪರ್ಯಾಯವಾದ ಪದವೂ ಇಲ್ಲ ,ವಸ್ತುವೂ ಇಲ್ಲ, ವ್ಯಕ್ತಿಯೂ ಇಲ್ಲ. ಜಗತ್ತಿನ ಏಕೈಕ ನಿಸ್ವಾರ್ಥಿ. ಅಮ್ಮ ಎಂದರೆ ಪ್ರೀತಿ.ಅಮ್ಮ ಎಂದರೆ ಮಮತೆ. ಅತ್ತು ಕರೆದಾಗಲೆಲ್ಲ ಎತ್ತಿ ಆಡಿಸಿ,ತುತ್ತಿಟ್ಟು ಕಥೆ ಕಟ್ಟಿದವಳು. ತಾಯಿ ಗುರುವಾಗಿ ವಿದ್ಯೆ-ಬುದ್ಧಿ ಕಲಿಸಿದವಳು.ಕಲ್ಲುಮುಳ್ಳಿನ ಮಧ್ಯೆ ಕೈಹಿಡಿದು ನಡೆಸಿದವಳು. ಪುಟ್ಟ ಹೆಜ್ಜೆಗಳು ತಡವರಿಸಿದಾಗ ಅತ್ತವಳು. ಭದ್ರವಾಗಿ ಬದುಕು ನೆಲೆ ಕಂಡಾಗ ಸಂತೃಪ್ತಿಯಿಂದ ಮನದುಂಬಿ ನಕ್ಕವಳು. ಅಡಿಗಡಿಗೆ ಎದುರಾದ ನೋವು ಅಸಹಾಯಕತೆಗಳನ್ನು ನುಂಗುತ್ತಲೇ ಬಂದವಳು. ವಾಸ್ತವದ ಬಿಸಿಯನ್ನು ಒಳಗೊಳಗೆ ಅರಗಿಸಿಕೊಂಡವಳು. ದುಡಿಮೆಯ ಹಾದಿಯಲ್ಲಿ ಬಾಳು ಸವೆಸಿದವಳು. ನಿವೃತ್ತಿಯೇ ಇಲ್ಲದ ಉದ್ಯೋಗದಲ್ಲಿ ಉರಿವ ದೀಪವಾಗಿಯೇ ಬದುಕಿಗೆ ಸರಿದವಳು. ಭಾವಕ್ಕೊಂದು ಜೀವ ಕೊಟ್ಟು, ಜೀವಕ್ಕೊಂದು ರೂಪ ಇಟ್ಟು ಬದುಕಿಗೊಂದು ಗುರುತು ಕೊಡುವ ಅಮ್ಮ. ಬದುಕಿನ ವಾಸ್ತವದ ಕಹಿ ಜಂಜಾಟವನ್ನು ಸದಾ ತನ್ನ ವಾತ್ಸಲ್ಯದ ನೆಗೆಯೊಳಗೆ ಅಡಗಿಸಿ ಸುಂದರ ಹಾಗೂ ಸರಳವಾದ ಬಾಲ್ಯವನ್ನು ಕೊಟ್ಟವಳು. ಹೆತ್ತು ಹತ್ತಿರವಾದವಳು. ತುತ್ತನಿತ್ತು ಬಾಳಬುತ್ತಿ ತೋರಿಸಿದವಳು. ಮುತ್ತನಿತ್ತು ಅಣಿಮುತ್ತನ್ನಾಗಿಸಿದವಳು. ಹೆಸರು ಇಟ್ಟ ದಷ್ಟೇ ಅಲ್ಲ. ಇಟ್ಟ ಹೆಸರು ಉಳಿಸಿದವಳು. ಎತ...