ಏನಿದು ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ???


ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟವು ಕ್ರಿ.ಶ.1837 ರಲ್ಲಿ ಬ್ರಿಟಿಷರ ವಿರುದ್ಧ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಗ ಜನರ ಮುಂದಾಳತ್ವದಿಂದ ನಡೆದ ಸ್ವಾತಂತ್ರ್ಯ ಹೋರಾಟ. ಇದನ್ನು ಕೊಡಗು-ಕೆನರಾ ಬಂಡಾಯ, ಕಲ್ಯಾಣಪ್ಪನ ಕಾಟಕಾಯಿ, ಅಮರ ಸುಳ್ಯದ ರೈತರ ದಂಗೆ ಎಂದೂ ಕರೆಯುತ್ತಾರೆ. ಅಕ್ಟೋಬರ್ 31, 1837 ರಂದು ಭಾರತದ ಸ್ವಾತಂತ್ರ್ಯ ಹೋರಾಟಗಾರ – ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿ ಕೋಟೆಯ ಆವರಣದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟರು. ಇದರಿಂದಾಗಿ ಭಾರತದ ನಾಗರೀಕತೆ ಒಂದು ವೇಳೆ ತಮ್ಮ ಕುಂದುಕೊರತೆಗಳನ್ನು ಬಹಿರಂಗವಾಗಿ ಧ್ವನಿಸಿದರೆ ಅದರ ಪರಿಣಾಮವನ್ನು ನೆನಪಿಸಿಕೊಳ್ಳುವ ಹಾಗೆ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿದರು.

1834ರ ಸುಮಾರಿಗೆ ಅತ್ತ ಕೊಡಗಿನಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕ ವೀರರಾಜೇಂದ್ರನನ್ನು ಬ್ರಿಟಿಷರು ಪಟ್ಟದಿಂದ ಕೆಳಗಿಳಿಸಿ, ಅಲ್ಲಿನ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅಲ್ಲದೆ, ಪಂಜ ಸೀಮೆಗೆ ಒಳಪಟ್ಟಿದ್ದ ಪುತ್ತೂರು, ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಪ್ರದೇಶವನ್ನು ಬ್ರಿಟಿಷರು ವಿಭಜಿಸಿದ್ದಲ್ಲದೆ, ಹೆಚ್ಚುವರಿಯಾಗಿ ಕಂದಾಯವನ್ನು ಹೇರಿದ್ದು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರ, ಕುಂಬಳೆ, ಹೊಸದುರ್ಗ, ಬಂಟ್ವಾಳ, ಉಡುಪಿ, ಫರಂಗಿಪೇಟೆ, ಮಂಗಳೂರು, ಬ್ರಹ್ಮಾವರ, ಕುಂದಾಪುರ ಹೀಗೆ ಇಷ್ಟೂ ಭಾಗವನ್ನು ಸೌತ್ ಕೆನರಾ ಎಂದು ಬ್ರಿಟಿಷರು ಗುರುತಿಸಿದ್ದರು. ಟಿಪ್ಪು ಮರಣಾ ನಂತರ ಈ ಭಾಗದಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಬ್ರಿಟಿಷರು ಸುಳ್ಯ, ಕೊಡಗನ್ನೂ ಆಕ್ರಮಿಸಿದ್ದರು.

ಅಮರ ಸುಳ್ಯ ಹೋರಾಟಕ್ಕೆ ಕಾರಣಗಳೇನು?ದಕ್ಷಿಣ ಕನ್ನಡದ ಸುಳ್ಯ ಪುತ್ತೂರುಗಳು ಕೆನರಾ ಪ್ರಾಂತ್ಯವಾಗುವವರೆಗೆ ರಾಜನಿಗೆ ವಸ್ತುಗಳ ರೂಪದಲ್ಲಿ ಕಂದಾಯ ಕಟ್ಟುವ ಪದ್ಧತಿ ಇತ್ತು. ಇದನ್ನು ಬದಿಗೊತ್ತಿ ಬ್ರಿಟಿಷರು ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಹಣದ ರೂಪದಲ್ಲಿ ಕಂದಾಯ ಕಟ್ಟುವಂತೆ ಜನರ ಮೇಲೆ ಕಟ್ಟಳೆ ಹೇರಿದ್ದು ಹೈರಾಣು ಮಾಡಿತ್ತು. ತಮ್ಮನ್ನು ವಿದೇಶಿಯರು ಬಂದು ಆಳುತ್ತಿದ್ದಾರೆ, ಕಂದಾಯದ ನೆಪದಲ್ಲಿ ಹಣದ ರೂಪದಲ್ಲಿ ತಮ್ಮ ಬೆವರಿನಿಂದ ಗಳಿಸಿದ ಸಂಪತ್ತನ್ನು ಹೀರುತ್ತಿದ್ದಾರೆ ಎನ್ನುವುದು ಜನರಿಗೆ ಮನದಟ್ಟು ಆಗತೊಡಗಿತ್ತು. ಬೆಳೆ ಕೊಯ್ಲಿಗೆ ಬಂದ ಕೂಡಲೇ ಅದರ ಬಹುಪಾಲನ್ನು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಿ, ಹಣವನ್ನು ಕಂದಾಯ ರೂಪದಲ್ಲಿ ಕಟ್ಟುತ್ತಿದ್ದ ಸ್ಥಿತಿ ಜನರಲ್ಲಿ ಒಂದೆಡೆ ಹಸಿವು, ಮತ್ತೊಂದೆಡೆ ಆಡಳಿತದ ವಿರುದ್ಧ ದಂಗೆ ಏಳಲು ಪ್ರೇರಣೆಯಾಗಿತ್ತು ಎಂದು ತಿಳಿದು ಬಂದಿದೆ.

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟಗಾರರು:
ಜಂಗಮ ಕಲ್ಯಾಣಸ್ವಾಮಿ,ಸ್ವಾಮಿ ಅಪರಂಪಾರ,ಕರಿ ಬಸವಯ್ಯ,ಗುಡ್ಡೆಮನೆ ಅಪ್ಪಯ್ಯ,ಕೆದಂಬಾಡಿ ರಾಮ ಗೌಡ,ಕುಜುಗೋಡು ಮಲ್ಲಪ್ಪ,ಕುಡೆಕಲ್ಲು ಅಪ್ಪಯ್ಯ,ಕುಡೆಕಲ್ಲು ಪುಟ್ಟ ಗೌಡ,ಕುಕ್ಕನೂರು ಚೆನ್ನಯ್ಯ,ಸಿರ್ಕಜೆ ಮಲ್ಲಯ್ಯ,ಸುಬೇದಾರ್ ನೇರಪಾಂಡ ಮಾದಯ್ಯ,ಚೆಟ್ಟಿ ಕುಡಿಯ,ಕುರ್ತ ಕುಡಿಯ,ಪೆರಾಜೆ ಕೃಷ್ಣಯ್ಯ,ಬೀರಣ್ಣ ಬಂಟ,ಕುಂಚಡ್ಕ ರಾಮ ಗೌಡ,ಹುಲಿಕಡಿದ ನಂಜಯ್ಯ,ಲಕ್ಷ್ಮಪ್ಪ ಬಂಗಾರಸ,ಕರಣಿಕ ಸುಬ್ಬಯ್ಯ,ಊಕಣ್ಣ ಬಂಟ,ಪಾಟೀಲ್ ಶಂಕರನಾರಾಯಣ,ಮಾನೆಗಾರ ನಾರಣಪ್ಪ,ಅಮೀನ್ ವೆಂಕಟ

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ನಮನಗಳು...

                       -✍️ ಸಂಜನಾ ವಾಲ್ತಾಜೆ 



Comments

Popular posts from this blog

ಸರ್ವಾಂಗ ಪ್ರಾವೀಣ್ಯೇ ಈಕೆ!!!

ADVERTISEMENT REVIEW

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!