ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ
ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ
ಅರ್ರೇ! ಈ ಕೃತಿಯ ಹೆಸರೇ ವಿಚಿತ್ರವಾಗಿದೆಯಲ್ವಾ ಎಂದು ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನಗನಿಸಿತು. ಶೀರ್ಷಿಕೆಯೇ ವಿಚಿತ್ರವಾಗಿದೆ! ಪ್ರೀತಿಸುವವರನ್ನು ಕೊಲ್ಲುವುದು ಎಂದರೇನು? ಸಾಧ್ಯವಾ ಅದು, ಅಷ್ಟು ಪ್ರೀತಿಸಿಕೊಳ್ಳುವುದು ಬದುಕುವುದಕ್ಕಾಗಿ ಅಲ್ಲವಾ? ಸಾಯಿಸಿ ಎನ್ನುತ್ತಿದ್ದಾರಲ್ಲ ಎಂಬ ನಾಲ್ಕೈದು ಪ್ರಶ್ನೆಗಳೊಂದಿಗೆ ಶುರುವಿಟ್ಟೆ..!! ಮುಂದುವರಿದು ಲೇಖಕರ ಮೊದಲ ಮಾತಿನಲ್ಲಿ " ಈ ಪುಸ್ತಕ ಸಾಹಿತ್ಯವನ್ನು ಈಗಾಗಲೇ ಓದಿಕೊಂಡಿರುವ ಪ್ರಾಜ್ಞರಿಗಾಗಿ ಅಲ್ಲ. ಈಗಷ್ಟೇ ಕನ್ನಡ ಕೃತಿಗಳನ್ನು ಓದಲು ಶುರು ಮಾಡಿರುವ ಹದಿಹರೆಯದ ತರುಣ ತರುಣಿಯರಿಗೆ ಆರಂಭಿಸಿರುವ ಮಾಲಿಕೆ ಇದು" ಎಂಬುವುದನ್ನು ಓದಿದಾಗ ಈ ಪುಸ್ತಕ ಓದಲೇಬೇಕೆನ್ನಿಸಿತು.
ಅಂತ್ಯವಿಲ್ಲದ ಕಥೆಗಳು ಈ ಕೃತಿಯ ಪ್ರತಿಯೊಂದು ಅಧ್ಯಾಯದಲ್ಲಿದೆ. ಪ್ರತೀ ಕಥೆಯ ಕೊನೆಗೂ ಹಲವು ಪ್ರಶ್ನೆಗಳನ್ನು ಮುಂದಿಡುವ ಜೋಗಿಯವರು ಅದನ್ನು ಓದುಗನ ವಿವೇಚನೆಗೆ ಬಿಟ್ಟುಬಿಡುತ್ತಾರೆ. ಪ್ರೀತಿಯ ಬಗ್ಗೆ, ಬದುಕಿನ ಅನಿಶ್ಚಿತತೆಯ ಬಗ್ಗೆ ಕಥೆಯ ಜೊತೆಗೆ ಅಲ್ಲಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಾರೆ. ಇಲ್ಲಿರುವ ವ್ಯಾಖ್ಯಾನಗಳು ಬಹು ಅಮೂಲ್ಯವಾದವುಗಳೂ, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದಂತವುಗಳೂ ಆಗಿವೆ. ಪ್ರೀತಿಯೆಂದರೆ "ಅವನು, ಅವಳು" ಪ್ರೀತಿಗೆ ಸೀಮಿತವಲ್ಲ. ಬದುಕಿನೆಡೆಗೆ ಇರುವುದೂ ಪ್ರೀತಿಯೇ!
ಒಂದು ಇಪ್ಪತ್ತು ಸಣ್ಣಕಥೆಗಳಿರುವ ೨೦೩ ಪುಟಗಳ ಚಿಕ್ಕ ಪುಸ್ತಕ. ಪ್ರೀತಿ ಕೇವಲ ಗಂಡು ಹೆಣ್ಣಿಗೆ ಸೀಮಿತವಲ್ಲ, ಒಂದು ಆಟಿಕೆಗೋ ಅಥವಾ ನಾವು ಕೊಂಡ ವಾಹನದೆಡೆಗೋ ಅಥವಾ ನಮ್ಮ ಹವ್ಯಾಸಗಳೆಡೆಗೂ ಪ್ರೀತಿ ಇರುತ್ತದೆ. ಪ್ರೀತಿಗೆ ಯಾರ ಅವಶ್ಯಕತೆಯೂ ಇರುವುದಿಲ್ಲ, ಅನಿವಾರ್ಯತೆಗಳಂತೂ ಇಲ್ಲವೇ ಇಲ್ಲ! ಅದೊಂದು ಸ್ವತಂತ್ರ ಇರುವು, ವಿಶಾಲವಾಗಿ ಬೆಳೆದುಕೊಂಡ ಮರ, ವಿಸ್ತಾರವಾಗಿ ಹರಡಿಕೊಂಡ ಸಾಗರ! ನಮ್ಮ ಲೌಕಿಕ ಅಲೌಕಿಕ ಬಯಕೆಗಳನ್ನು ಭಾವಗಳನ್ನು ಹೊತ್ತೊಯ್ದು ಅಲ್ಲಿ ಆಶ್ರಯ ಹುಡುಕಿಕೊಳ್ಳುತ್ತೇವೆ.
ಈ ಪುಸ್ತಕದ ಎಲ್ಲಾ ಕಥೆಯಲ್ಲೂ ಒಂದೊಂದು ಬಗೆಯ ವೈಶಿಷ್ಟ್ಯವಿದೆ. ಬದುಕು ಮತ್ತು ಪ್ರೀತಿಯ ಸತ್ಯಗಳನ್ನು ಇಷ್ಟಿಷ್ಟೇ ತೆರೆದಿಡುತ್ತಾ ಪ್ರತಿ ಕಥೆಗೂ ಒಂದು ಅಸ್ಪಷ್ಟ ಅಂತ್ಯ ನೀಡುತ್ತಾ ಓದುಗನ ಮನಸಲ್ಲಿ ಹೊಸ ಹೊಸ ಪ್ರಶ್ನೆಗಳನ್ನು ಉಳಿಸುತ್ತಾರೆ. ಹೀಗೆ ಎಂದು ಕೊನೆಯಾಗಿಸಿದ್ದರೆ ಕಥೆಯ ಹರಹು ಕಡಿಮೆಯಾಗುತ್ತಿತ್ತು. ಕಥೆಯನ್ನಷ್ಟೇ ಹೇಳಿ ನಮ್ಮ ಅಭಿಪ್ರಾಯಗಳಿಗೆ ಅವಕಾಶ ನೀಡಿದ್ದಾರೆ. ಓದುಗನಾಗಿ ಮಾತ್ರ ಓದದೇ ಲೇಖಕರೊಡನೆ ಲೇಖಕರಾಗುವ ವಿಶಿಷ್ಟ ಅವಕಾಶಗಳಿದೆ.
ಬದುಕು ದುಸ್ತರವೆನಿಸಿದರೆ, ಪ್ರೀತಿ ಜಾಡ್ಯವೆನಿಸಿದರೆ ಈ ಪುಸ್ತಕವನ್ನು ಓದಿ. ದುರಸ್ತಿ ಕಾರ್ಯ ಶುರುಮಾಡಬೇಕಿನಿಸಬಹುದು. ಪ್ರೀತಿ ಕೊಡುವ ನೋವುಗಳಿಗೆ, ಬದುಕು ಎಸೆಯುವ ಪ್ರಶ್ನೆಗಳಿಗೆ ನಿರ್ದಿಷ್ಟ ಕಾರಣಗಳನ್ನು ಜೋಗಿರವರು ನೀಡಿದ್ದಾರೆ. ಗಾಢವಾಗಿ ಅರ್ಥೈಸಿಕೊಳ್ಳುವಿರಾದರೇ ಹೌದಲ್ಲವಾ ಇದೇ ಕಾರಣಕ್ಕೆ ಇಷ್ಟು ದಿನ ಆಶಾಭಂಗವಾಗುತ್ತಿತ್ತಾ ಎಂಬ ಆಲೋಚನೆ ನೀಡುತ್ತದೆ. ಯಾವ ವೇದಾಂತವನ್ನು ಹೇಳದೇ ಪ್ರೀತಿಯನ್ನು ಅದರ ಚೌಕಟ್ಟಿನಲ್ಲೇ ಅಚ್ಚುಕಟ್ಟಾಗಿ ವಿವರಿಸಿ ಹೇಳಿದ್ದಾರೆ.
ಪುಸ್ತಕದ ಕೊನೆ ಕೊನೆಗೆ ನಿಮ್ಮೊಳಗೊಬ್ಬ ಜೀವನೋತ್ಸಾಹಿ ಹುಟ್ಟುತ್ತಾನೆ. ಪ್ರೀತಿಸಿಕೊಂಡವವರಾಗಿದ್ದರೆ ಹೊಸ ಪ್ರೇಮಿಯೊಬ್ಬ ಹುಟ್ಟುತ್ತಾನೆ. ಉಳಿದು ಹೋದವರಾಗಿದ್ದರೆ ಬದುಕಿನೆಡೆಗೆ ಹೊಸ ಚಿಲುಮೆಯೊಂದು ಹುಟ್ಟುತ್ತದೆ.'ಪ್ರೀತಿಸುವವರನ್ನು ಕೊಂದುಬಿಡಿ' ಎಂಬ ಶೀರ್ಷಿಕೆಯ ನಿಜಾರ್ಥ, ಕೃತಿಯ ಕೊನೆಯ ಕೆಲವು ಪುಟಗಳಲ್ಲಿ ನಮಗೆ ಸ್ಪಷ್ಟವಾಗಿ ದಕ್ಕುತ್ತದೆ. ಲೇಖಕರ ಅಗಾಧವಾದ ಜೀವನಾನುಭವಗಳಿಂದ ಕೂಡಿದ ಪ್ರತಿಯೊಂದು ಅಧ್ಯಾಯವೂ ಮನಮುಟ್ಟುತ್ತದೆ.
– ✍️ ಸಂಜನಾ ವಾಲ್ತಾಜೆ
Comments
Post a Comment